ಮೋಟರ್ ಉದ್ಯಮ -
ಪೆಟ್ರೋಲ್  ಇಲ್ಲವೇ ಡೀಸಲ್ ಎಣ್ಣೆಯನ್ನು ಇಂಧನವಾಗಿ ಬಳಸಿಕೊಂಡು ಪಯಣಿಗರನ್ನೂ ಸರಕನ್ನೂ ರಸ್ತೆ ಮೇಲೆ ಸಾಗಿಸುವ ಸ್ವಯಂಚಾಲಿ ವಾಹನಗಳ ತಯಾರಿಕೆ.

     	ಮನುಷ್ಯ ಶಕ್ತಿ ಅಥವಾ ಪ್ರಾಣಿಶಕ್ತಿ ಬಳಸದೇ ನೆಲದ ಮೇಲೆ ಸಾಗುವ ವಾಹನದ  ನಿರ್ಮಾಣ ಸಾಧ್ಯವೇ ?  ಈ ಪ್ರಶ್ನೆಗೆ ಹದಿನೈದನೆಯ ಶತಮಾನದಲ್ಲಿ ಮೊದಲ ಪ್ರಾಯೋಗಿಕ ಪರಿಹಾರ ಒದಗಿತು. ಇಟಲಿಯ ಜಕಾಪೋ ಮಾರಿಯಾನೊ 1449ರಲ್ಲೂ ರಾಬರ್ಟೋ ವಾಲ್ಚುರೀಯೋ 1455ರಲ್ಲೂ ವಾಯುಚಲಿತ ನೋದಕಗಳ ನೆರವಿನಿಂದ ಚಲಿಸುವ ಕಾರನ್ನು ಆಲೇಖಿಸಿದರು. ಇಟಲಿಯ ಲೀಯೊನಾರ್ಡೋ ಡ ವಿನ್ಚಿ (1452-1519) ಸುರುಳಿ ಕಾರು ಎಂದೆನಿಸಿದ ಕೋಡೀಸ್  ಅಟ್ಲಾಂಟಿಕೊ ವಾಹನದ ಪರಿಕಲ್ಪನೆಯನ್ನು ರೂಪಿಸಿದ (1482).  ಒಂದು ಶತಮಾನಾನಂತರ ಟಾಲಿಮಾಂಟ್ ಡೆ ರೇಯೂ ಈ ಆಲೇಖ್ಯವನ್ನು ಪ್ರಯತ್ನಿಸಿ ವಿಫಲನಾದ. ಇಂಗ್ಲೆಂಡಿನ ಮಹಾಮೇಧಾವಿ ಐಸಾಕ್ ನ್ಯೂಟನ್ (1642-1727) ಧಾರಾಚಲಿತ (ಜೆಟಮೂವ್ಡ್) ವಾಹನ ರಚಿಸಿದ. ನಾಲ್ಕು ಚಕ್ರಗಳ ನಡುವೆ ನೀರಿನ ಹಬೆಯ ಧಾರೆ ಸೂಸುವ ಏರ್ಪಾಡಿರುವ ಆವಿಗೆಯನ್ನು (ಬಾಯ್ಲರ್) ಈ ವಾಹನದಲ್ಲಿ ಅಳವಡಿಸಲಾಗಿತ್ತು.  ಪ್ರತಿಕ್ರಿಯಾತತ್ತ್ವ ಇದರ ಆಧಾರ. ಆದರೆ ಇವಾವುವೂ ವಾಸ್ತವ ರೂಪಕ್ಕೆ ಇಳಿಯಲಿಲ್ಲ. ಇಲ್ಲಿಯ ಮುಖ್ಯ ಸಮಸ್ಯೆ ಈ ಯಂತ್ರದಲ್ಲಿ ಉತ್ಪಾದನೆಯಾದ ಶಕ್ತಿ ವಾಹನದ ತೂಕವನ್ನು ಎಳೆಯುವಲ್ಲಿ ಸೋಲುತ್ತಿದ್ದುದು-ವೆಚ್ಚವನ್ನು ಭರಿಸಲಾಗದ ಆದಾಯವಿದ್ದಂಥ ಪರಿಸ್ಥಿತಿ. ಆದಾಯವನ್ನು ಹೆಚ್ಚಿಸುವುದು ಹೇಗೆ ?

    	ಈ ದಿಶೆಯಲ್ಲಿ ಮೊತ್ತಮೊದಲ ಪ್ರಾಯೋಗಿಕ ಹಂತ ತಲುಪಿದ್ದು ಉಗಿಯಂತ್ರದ (ಸ್ಟೀಮ್ ಎಂಜಿನ್)  ಉಪಜ್ಞೆಯಿಂದ.  ಸ್ಕಾಂಟ್ಲೆಂಡಿನ ಎಂಜಿನಿಯರ್ ಜೇಮ್ಸ್ ವಾಟ್ (1736-1819) ರಸ್ತೆಗಳ ಮೇಲೆ ಚಲಿಸುವ ವಾಹನಗಳನ್ನು ಕುರಿತು ಚಿಂತಿಸಿದ್ದ. (ಈ ಬಗ್ಗೆ 1784ರಲ್ಲಿ ಏಕಸ್ವಕ್ಕೆ ಈತ ಅರ್ಜಿ ಸಲ್ಲಿಸಿದ್ದ). ಆದರೆ ಈ ಕುರಿತ ಪ್ರಯೋಗವನ್ನು ತನ್ನ ಶಿಷ್ಯರುಗಳಿಗೆ ಬಿಟ್ಟುಬಿಟ್ಟಿದ್ದ.  ಅಮೆರಿಕದ ಉಪಜ್ಞೇಕಾರ ನಾಥನ್ ರೀಡ್ ನಾಲ್ಕು ಚಕ್ರಗಳ ಸ್ವಯಂಚಲಿ ಕಾರಿನ  ಏಕಸ್ವಾಮ್ಯವನ್ನು  1790ರ ಸುಮಾರಿಗೆ ಪಡೆದ.  ಈ ವಾಹನದ ನಾಲ್ಕು ಚಕ್ರಗಳ ಪೈಕಿ ಎರಡು ಏಕ-ಸಿಲಿಂಡರ್ ಎಂಜಿನ್ನುಗಳ ಸಹಾಯದಿಂದ ಕಾರ್ಯವೆಸಗುತ್ತಿದ್ದುವು.  ಪರಿಸ್ಥಿತಿಹೀಗಿದ್ದರೂ ಮೊತ್ತಮೊದಲು ಉಪಜ್ಞೆಕಾರನೆಂದು ಜನರಿಂದ ಮಾನ್ಯತೆ ಪಡೆದಾತ ಫ್ರೆಂಚ್ ಎಂಜಿನಿಯರ್ ನಿಕೊಲಸ್ ಜೋಸೆಫ್ ಕಾಗ್‍ನೊ (1725-180).  ಈತ ರೂಪಿಸಿದ ವಾಹನಕ್ಕೆ ಮೂರು ಚಕ್ರಗಳು ಮಾತ್ರ ಇದ್ದವು (1769). ಮರು ವರ್ಷವೇ ಈತ ರಚಿಸಿದ ಇನ್ನೊಂದು ವಾಹನ ಮೊದಲನೆಯದಕ್ಕಿಂತಲೂ ದೊಡ್ಡದಾಗಿದ್ದು (ಫಾರ್ಡಿಯರ್) ಕೆಲವೊಂದು ದಿನಗಳತನಕ ಚಾಲ್ತಿಯಲ್ಲಿತ್ತು.  ಈಗ ಅದು ಪ್ಯಾರಿಸ್ಸಿನ ಒಂದು ವಸ್ತುಸಂಗ್ರಾಹಾಲಯದಲ್ಲಿದೆ.  ಏಕಕ್ರಿಯೆಯ ಜೋಡಿ ಸಿಲಿಂಡರ್ ಎಂಜಿನ್ ಈ ವಾಹನದ ಚಾಲಕಾಂಗ.  ಡೆನಿಸ್ ಪಾಪಿನ್ ಎಂಬಾತನ ಪರಿಕಲ್ಪನೆಯ ಪ್ರಕಾರ ರೂಪಿಸದ್ದ ಉಗಿಯಂತ್ರದಿಂದ ಹೊಮ್ಮುತ್ತಿದ್ದ ಉಗಿ ಈ ವಾಹನಕ್ಕೆ ಚಾಲನ ಸಾಮಥ್ರ್ಯ ಒದಗಿಸಿತ್ತು.  ಟ್ರ್ಯಾಕ್ಟರ್ ಎಂಬ ಹೆಸರಿದ್ದ ಈ ವಾಹನದ ವೇಗ ಗಂಟೆಗೆ ಸುಮಾರು 6 ಮೈಲುಗಳು (9 ಕಿ.ಮೀ.).  ಕಾರ್ಯದಕ್ಷತೆ ಹಾಗೂ ಉಪಯೋಗ ದೃಷ್ಟಿಯಿಂದ ಇದು ಅಷ್ಟೇನೂ ವ್ಯವಹಾರಯೋಗ್ಯವಾಗಿರಲಿಲ್ಲ. 1771ರ ವೇಳೆಗೆ ಇಂಥ ವಾಹನಗಳ ತಯಾರಿಕೆಯನ್ನು ನಿಲ್ಲಿಸಿದ್ದು ಮಾತ್ರವಲ್ಲದೆ 1828 ರ ತನಕ ಈ ದಿಶೆಯಲ್ಲಿ ಇತರ ಯಾವುದೇ ಮಹತ್ತ್ವ ಪೂರ್ಣ ಪ್ರಯೋಗವೂ ನಡೆಯಲಿಲ್ಲ.  ಕಾಗ್‍ನೊನ ಮೋಟರ್ ವಾಹನ ಉಪಜ್ಞೆಗೊಂಡು ಸುಮಾರು 30 ವರ್ಷಾನಂತರ ಇಂಗ್ಲೆಂಡಿನ ಕಾರ್ನ್‍ವಾಲ್ ಪ್ರಾಂತ್ಯದ ಎಂಜಿನಿಯರ್ ರಿಚರ್ಡ್ ಟ್ರೆವಿಕತ್ ಉಗಿಚಾಲಿತ ಕೋಚ್ ವಾಹನವೊಂದನ್ನು ರೂಪಿಸಿ ಜೋಡಿಸಿದ. ಇದು ಸಾಕಷ್ಟು ಯಶಸ್ಸನ್ನು ಕಂಡಿತು. ಅದರೆ ದುರದೃಷ್ಟವಶಾತ್ ಅದು ಕ್ರಿಸ್‍ಮಸ್ ಹಬ್ಬದ ವೇಳೆ ಅಗ್ನಿ ಆಕಸ್ಮಿಕಕ್ಕೆ ಒಳಗಾಗಿ ನಾಶವಾಯಿತು. ಇತ್ತ ಟ್ರೆವಿತೆಕ್ 1803ರಲ್ಲಿ ತನ್ನ ಎರಡನೆಯ ಕೋಚ್‍ವಾಹನವನ್ನು (ಲಂಡ್‍ಸ್ಟೀಮ್ ಕ್ಯಾರಿಯೇಜ್) ರೂಪಿಸಿ ಜೋಡಿಸಿದ. ಆದರೆ ಇದನ್ನು ಲಂಡನ್ನಿಗೆ ತಂದಾಗ  ಇದರ ಬಗ್ಗೆ ಜನರಿಗೆ ಆಸಕ್ತಿ ಮೂಡಲಿಲ್ಲ.  ಮಾರ್ಕ್ ಸೆಗ್ಯೂ ಎಂಬಾತ ಉಗಿಚಾಲಿತ ವಾಹನಕ್ಕೆ ಪೆಕ್ಕ್ಯೂರ್ ಗಿಯರನ್ನು ಅಳವಡಿಸಿ ಚಾಲನೆಯ ಚಕ್ರಗಳ ಮೇಲಿನ ಒತ್ತಡ ಕಡಿಮೆಯಾಗುವಂತಾಗಿಸಿದ.
 
    	ಮುಂದೆ ಬಂದಂಥವು ಜೂಲಿಯಸ್ ಗ್ರಿಫಿತ್‍ನ ಹೊಸ ಉಗಿಬಂಡಿ (1821) ಹಾಗೂ ಗೋಲ್ಡ್ ವರ್ತಿ ಗರ್ನಿಯ ಉಗಿ ಬಂಡಿ (1825), ಗರ್ನಿಯ ಉಗಿಬಂಡಿಯನ್ನು ಚಾಲರ್ಸ್ ಡ್ಯಾನ್ಸ್ 1831ರಲ್ಲಿ ಗ್ಲೊಸೆ ಸೆಟ್ಟರ್ ಮತ್ತು ಚೆಲ್‍ಟನ್ ಹ್ಯಾಮ್‍ಗಳ ನಡುವೆ ಓಡಿಸುತ್ತಿದ್ದ. ವಾಲ್ಟರ್ ಹ್ಯಾನ್‍ಕಾಕ್ ಒಂಬತ್ತು ಉಗಿಬಂಡಿಗಳ  ತಂಡ ರೂಪಿಸಿ ಲಂಡನ್ನಿನ ಪ್ರಮುಖ ಬೀದಿಗಳ ಮೇಲೆ ಓಡಿಸಿದ. 1834 ಆಗಸ್ಟ್ ಮತ್ತು ನವೆಂಬರ್ ನಡುವಿನ ಅವಧಿಯಲ್ಲಿ ಈ ವಾಹನಗಳು 4000 ಪ್ರಯಾಣಿಕರನ್ನು ಹೊತ್ತು ಸಾಗಿಸಿದ್ದುವೆನ್ನಲಾಗಿದೆ.  ಅನಂತರದ ಹತ್ತು ವರ್ಷ ಈ ವಾಹನಗಳು ಚಾಲ್ತಿಯಲ್ಲಿದ್ದು ಕ್ರಮೇಣ ನಿಂತುಹೋದವು.

    	ಉಗಿಚಾಲಿತ ವಾಹನಗಳಿಗೆ ವೇಗಮಿತಿಯನ್ನೂ ಒಡ್ಡಲಾಗಿತ್ತು : ಊರ ಹೊರಗಾದರೆ ಗಂಟೆಗೆ 4 ಮೈಲುಗಳು (ಸುಮಾರು 6 ಕಿ.ಮೀ.) ಊರೊಳಗಾದರೆ ಗಂಟೆಗೆ 2 ಮೈಲುಗಳು (ಸುಮಾರು 3 ಕಿ.ಮೀ.) ! ಸ್ವಯಂಚಾಲಿತಗಾಡಿ ರಸ್ತೆಯ ಮೇಲೆ ಚಲಿಸಿದರೆ ಒಬ್ಬ ಆಳು ಅದರ ಮುಂದೆ ಕೆಂಪು ಬಾವುಟ ಹಿಡಿದುಕೊಂಡು ಹೋಗಬೇಕೆಂಬ ಕಾನೂನು ಇತ್ತು. ಇಂಗ್ಲೆಂಡಿನಲ್ಲಿ ಉಗಿಚಾಲಿತ ವಾಹನಗಳ ನಿರ್ಮಾಣಕ್ಕೆ ಮುಂಬಂದವರು ಕೆಲವೇ ವ್ಯಕ್ತಿಗಳು ಮಾತ್ರ. ಮುಂದಿನ ನಿರ್ಮಾಣಕಾರ್ಯ ಯುರೋಪಿನ ದೇಶಗಳಿಗೆ ವರ್ಗಾವಣೆಯಾಯಿತು.

    	ಮೋಟರ್ ಕಾರಿನ ತಯಾರಿಕೆಗೆ ಸಂಬಂಧಿಸಿದಂತೆ ಯುರೋಪಿನಲ್ಲಿ ಜರ್ಮನಿಯ ಕಾರ್ಲ್ ಬೆನ್ಜ್‍ನ (1844-1929) ಪ್ರಯತ್ನದಿಂದ ಆಧುನಿಕ ಪೆಟ್ರೋಲ್ ವಾಹನಗಳ ರಚನೆಯಲ್ಲಿ ಒಂದು ದೊಡ್ಡ ಕ್ರಾಂತಿ ಆಯಿತು.  1889ರಲ್ಲಿ ಗಾಟ್ಲೀವ್ ಡ್ಯಾಮ್ಲರ್ (1834-1900) ನಾಲ್ಕು ಗಾಲಿಗಳುಳ್ಳ ಗಾಡಿಯನ್ನು ಪೆಟ್ರೋಲ್ ಎಂಜಿನ್ನಿನ ಸಹಾಯದಿಂದ ನಡೆಸಿದ.  ಇದಕ್ಕೆ ವೇಗವನ್ನು ತಗ್ಗಿಸುವ ಸಾಧನಗಳು ದೊರೆಯದಿದ್ದುದರಿಂದ ಈತ ಫ್ರಾನ್ಸಿಗೆ ತೆರಳಿ ಅಲ್ಲಿಯ ಲೇವಾಸರ್ ಎಂಬ ಕಂಪನಿಗೆ ಕಾರು ನಿರ್ಮಾಣದ ಹಕ್ಕನ್ನು ಮಾರಿದ.  ಅನಂತರ ಈ ಕಂಪನಿ ಫ್ರಾನ್ಸಿನಲ್ಲಿ ಮೋಟರ್ ವಾಹನಗಳ ತಯಾರಿಕೆಯ ದೊಡ್ಡ ಉದ್ಯಮವಾಗಿ ಬೆಳೆಯಿತು.

    	1883ರಲ್ಲಿ ಕಾರ್ಲ್ ಬೆನ್ಜ್ ಗಂಟೆಗೆ 16 ಕಿ.ಮೀ. ವೇಗದಲ್ಲಿ ಚಲಿಸುವ ವಾಹನವನ್ನು ನಿರ್ಮಿಸಿದ.  ಅಲ್ಲಿಂದ ಮುಂದೆ ಅನೇಕರು ಈ ಉದ್ಯಮದಲ್ಲಿ ತೊಡಗಿ ಸುಧಾರಣೆ ತಂದರು.  ಕಾಬ್ರ್ಯುರೇಟ್ ಅಳವಡಿಕೆ, ಪೆಟ್ರೋಲನ್ನು ಸ್ಫೋಟ ಗೊಳಿಸುವ ಕ್ರಮ, ಗಿಯರು ಸ್ಪ್ರಿಂಗ್, ಟೈರುಗಳು ಮುಂತಾದವುಗಳ ಜೋಡಣೆ, ವಾಹನಗಳ ಆಕಾರ, ಆಸನದ ಸೌಲಭ್ಯ ಮುಂತಾದ  ವಿಚಾರಗಳಲ್ಲಿ ಸುಧಾರಣೆ ಪ್ರಾರಂಭವಾಯಿತು.  1899ರಲ್ಲಿ ಪ್ಯಾರಿಸ್ ಮತ್ತು ವಿಮಾನಗಳ ನಡುವೆ ಅಶ್ವರಹಿತ ವಾಹನಗಳ ಸ್ಪರ್ಧೆಯಲ್ಲಿ 102 ವಾಹನಗಳು ಭಾಗವಹಿಸಿದ್ದವು. ಆಗಿನ ಮೋಟರ್ ವಾಹನಗಳ ವೇಗ ಗಂಟೆಗೆ 20 ಕಿ.ಮೀ. ಇತ್ತು.

    	ಯುರೋಪಿನ ವಾಹನಗಳು ಅಮೆರಿಕದಲ್ಲಿ ಕಾಣಿಸಿಕೊಂಡರೂ ಆ ವೇಳೆಗೆ ಅಲ್ಲಿಯ ಜನ ತಾವೇ ಅಂಥ ವಾಹನಗಳ ನಿರ್ಮಾಣಕ್ಕೆ ತೊಡಗಿದ್ದರು.  ಈ ಸ್ಪರ್ಧೆಯಲ್ಲಿ ಕ್ರಾಂತಿ ಉಂಟುಮಾಡಿದಾತ ಹೆನ್ರಿ ಫೋರ್ಡ್ (1863-1947).  ಗಂಟೆಗೆ 145 ಕಿ.ಮೀ. ವೇಗದಿಂದ ಚಲಿಸುವ ವಾಹನವನ್ನು ಈತ ರಚಿಸಿ 1904ರಲ್ಲಿ ಪ್ರದರ್ಶಿಸಿದ.  ಇದರಿಂದ ಯುರೋಪ್ ಮತ್ತು ಅಮೆರಿಕ ಖಂಡಗಳಲ್ಲಿ ಮೋಟರ್ ಉದ್ಯಮದ ಸ್ಪರ್ಧೆಯ ಹುಚ್ಚು ಹಬ್ಬಿತು.  ಸುಧಾರಿತ ವಾಹನಗಳ ನಿರ್ಮಾಣ ಉದ್ಯಮಪತಿಗಳ ಗೀಳಾಯಿತು.  ಜರ್ಮನಿಯ ಬ್ರಿಟ್ಸ್ ಅಂಡ್ ಬೆನ್ಜ್ ಎಂಬ ವಾಹನ ಗಂಟೆಗೆ 230 ಕಿ.ಮೀ. ವೇಗದಿಂದ ಓಡಿ ದಾಖಲೆ ಸ್ಥಾಪಿಸಿತು (1911).  ಉದ್ಯಮ ಪೈಪೋಟಿ ಪ್ರಾರಂಭವಾಗಿ ಮೋಟರ್ ವಾಹನದ ತಯಾರಿಕೆ ವೃದ್ಧಿಸಿತು.

    	ಅಮೆರಿಕದ ಡೆಟ್ರಾಯಿಟ್‍ನಲ್ಲಿ ಮೋಟರ್ ವಾಹನಗಳನ್ನು ನಿರ್ಮಿಸುವ ನಾಲ್ಕೈದು ದೊಡ್ಡ ಉದ್ಯಮಗಳ ಸ್ಥಾಪನೆಯಾಯಿತು.  ಇಂಥ ಒಂದು ಸಂಸ್ಥೆಯ ಯಜಮಾನ ಹೆನ್ರಿ ಫೋರ್ಡ್.  ಈತ ನಿರ್ಮಿಸಿದ ಹೆರ್ರೋ ಆಗಿನ ಕಾಲಕ್ಕೆ ಅಧಿಕ ವೇಗದಿಂದ ಚಲಿಸುವ ಮೋಟಾರ್ ಬಂಡಿ.  1909ರಲ್ಲಿ ಫೋರ್ಡ್ ಮಾಡೆಲ್-ಟಿ ಎಂಬ ವಾಹನ ನಿರ್ಮಿಸಿ ವಿಶೇಷವಾಗಿ ಅಧಿಕ ಮೊತ್ತದಲ್ಲಿ ತಯಾರಿಸಲು ಉಪಕ್ರಮಿಸಿದ.  ಕಡಿಮೆ ಬೆಲೆಗೆ ಜನಸಾಮಾನ್ಯರು ಕೊಳ್ಳುವಂತೆ ಅನುಕೂಲ ಕಲ್ಪಿಸಿದ.  ಇದರಿಂದ ಆಗಿನ ಕಾಲಕ್ಕೆ ಮಾಡೆಲ್-ಟಿ ಅತ್ಯಂತ ಜನಪ್ರಿಯವಾಯಿತು.  1909 ರಿಂದ 1927 ರ ತನಕ 150 ಲಕ್ಷ ಮೋಟಾರ್ ಕಾರುಗಳನ್ನು ಉತ್ಪಾದನೆ ಮಾಡಿ ದಾಖಲೆ ಸ್ಥಾಪಿಸಿದ.  ಮೋಟರ್ ವಾಹನದ ಬಿಡಿ ಭಾಗಗಳು ಸ್ವಯಂಚಲಿ ಯಂತ್ರಗಳಿಂದ ತಯಾರಾಗಿ ಸಾಗುಪಟ್ಟಿಯ ಮೂಲಕ ಸಾಲಾಗಿ ನಿಂತು ಕೆಲಸಮಾಡುವ ಕೆಲಸಗಾರರ ಮುಂದೆ ಒಂದೊಂದಾಗಿ ಬರುವಂತೆ ಏರ್ಪಾಡಾಯಿತು.  ಒಬ್ಬೊಬ್ಬ ಕೆಲಸಗಾರ ಆತ ಇದ್ದಲ್ಲೇ ಒಂದೊಂದು ಭಾಗವನ್ನು ನಿರ್ದಿಷ್ಟ ಕ್ರಮದಲ್ಲಿ ಜೋಡಿಸಿದಾಗ ಪೂರ್ಣಗೊಂಡ ಮೋಟರ್ ಹೊರಬರುತ್ತಿತ್ತು.

    	ಹೀಗೆ ಮೋಟರ್ ಕಾರುಗಳ ಉತ್ಪಾದನೆಯಲ್ಲಿ ಒಂದು ಕ್ರಾಂತಿ ಸಂಭವಿಸಿತ್ತು.  ಮುಂದೆ ಸಹಜವಾಗಿ ಹಲವಾರು ಹೊಸ ಮಾದರಿಗಳು ರಂಗಪ್ರವೇಶಿಸಿ ಸುಧಾರಣೆಗಳು ಅವಿಚ್ಛಿನ್ನವಾಗಿ ಸಾಗುತ್ತಲೇ ಬಂದಿವೆ.  ವಾಹನಗಳ ಉಪಯೋಗ ಅಧಿಕ ಪ್ರಮಾಣದಲ್ಲಿ ಬೆಳೆದಿದೆ.  ಏಕವ್ಯಕ್ತಿ ಪ್ರಯಾಣದ ವಾಹನದಿಂದ ಹಿಡಿದು ನೂರಾರು ಜನ ಪ್ರಯಾಣ ಗೈಯಲು ಸಾಧ್ಯವಿರುವ ಬಸ್ ವಾಹನದವರೆಗೆ ವಾಹನಗಳನಿರ್ಮಾಣ ಸಾಧ್ಯವಾಗಿದೆ.  ರೈಲ್ವೆ ಪ್ರಯಾಣಕ್ಕೂ (ಹಳಿ) ಬಸ್ಸಿನ ಪ್ರಯಾಣಕ್ಕೂ (ರಸ್ತೆ) ಸ್ಪರ್ಧೆ ಏರ್ಪಟ್ಟಿದೆ.  ಸಾಮಾನು ಸಾಗಾಣಿಕೆ ಟ್ರಕ್ಕುಗಳು ನಿರ್ಮಾಣವಾಗಿ ಹೆಚ್ಚು ಸಾಗಾಣಿಕೆ ಇಂಥ ವಾಹನಗಳಿಂದಲೇ ಆಗುತ್ತಿದೆ.  ವೇಗದ ಸ್ಪರ್ಧೆ ಈಗಲೂ ಜರುಗುತ್ತಲೇ ಇದೆ.  ಈ ಸ್ಪರ್ಧೆಯಿಂದ ವಾಹನಗಳ ಆಕಾರ ಮತ್ತು ಸೌಲಭ್ಯದಲ್ಲಿ ಹೊಸತನವೂ ಬೆಳೆಯುತ್ತದೆ.      	ಮೋಟರ್ ಉದ್ಯಮ ಪ್ರಪಂಚದ ಎಲ್ಲ ಭಾಗಗಳಲ್ಲೂ ಅದರಲ್ಲೂ ಮುಖ್ಯವಾಗಿ ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ, ಫ್ರಾನ್ಸ್, ಇಟಲಿ, ಕೆನಡ, ಸ್ಪೆನ್, ರಷ್ಯ, ಮೆಕ್ಸಿಕೋ ಹಾಗೂ ಭಾರತಗಳಲ್ಲಿ ಬೆಳೆದುಬಂದಿದೆ.  ಇದರಲ್ಲಿ ಕಾರು ಲಾರಿಗಳೂ ಇವಕ್ಕೆ ಬೇಕಾಗುವ ಬಿಡಿಭಾಗಗಳೂ ಸೇರಿವೆ.  ಯುರೋಪಿನಲ್ಲಿ ಈ ಉದ್ಯಮ ಪ್ರಾರಂಭವಾದದ್ದು ನಿಜ.  ಆದರೆ 20 ನೆಯ ಶತಮಾನದ ಪೂರ್ವಾರ್ಧದಲ್ಲಿ ಈ ರಂಗದ ಧುರೀಣತ್ವ ಅಮೆರಿಕದ ಸಂಯುಕ್ತ ಸಂಸ್ಥಾನಕ್ಕೆ ವರ್ಗಾವಣೆಗೊಂಡಿತು.   ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಯುರೋಪ್ ಮತ್ತು ಜಪಾನ್ ಕೂಡ ಮೋಟರ್ ಉತ್ಪಾದನೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ.

    	ಮೊದಲಿಗೆ ಸಣ್ಣ ಕಾರ್ಖಾನೆಗಳು ಪ್ರಾರಂಭವಾಗಿ ಎಲ್ಲ ಬಿಡಿ ಭಾಗಗಳನ್ನೂ ಕೈಯಿಂದಲೇ ತಯಾರಿಸಿ ಕಾರುಗಳನ್ನು ಜೋಡಿಸಲಾಯಿತು.  ಅಧಿಕ ಮಾರಾಟವಾಗಲಿ ಲಾಭವಾಗಲಿ ಇಲ್ಲದೆ ನಡೆಯುತ್ತಿದ್ದ ಹಲವಾರು ಸಣ್ಣ ಕಾರ್ಖಾನೆಗಳನ್ನು ಮುಚ್ಚಬೇಕಾಯಿತು.  ಅನಂತರ ಬೈಸಿಕಲ್ ತಯಾರಿಸುವ ಕಾರ್ಖಾನೆಯವರೂ ಕಾರುಗಳನ್ನು ನಿರ್ಮಿಸಲು ಪ್ರಾರಂಭಿಸಿದರು.  ಕುದುರೆಗಾಡಿ ತಯಾರಿಸುತ್ತಿದ್ದ ಜರ್ಮನಿಯ ಓಪೆಲ್, ಇಂಗ್ಲೆಂಡಿನ ಮಾರಿಸ್ ಸಂಸ್ಥೆಗಳು ಜರ್ಮನಿಯ ಡ್ಯಾಮ್ಲರ್, ಬ್ರಿಟನ್ನಿನ ಲ್ಯಾನ್‍ಚೆಸ್ಟರ್, ಅಮೆರಿಕದ ಓಲ್ಟ್ಸ್; ಹಡಗಿನ ಎಂಜಿನ್ನುಗಳನ್ನು ತಯಾರಿಸುತ್ತಿದ್ದ ಬ್ರಿಟನ್ನಿನ ವಾಕ್ಸಾಲ್; ಯಂತ್ರಗಳನ್ನು ತಯಾರಿಸುತ್ತಿದ್ದ ಅಮೆರಿದ ಲೇಲ್ಯಾಂಡ್; ಬಟ್ಟೆಒಗೆವ ಯಂತ್ರಗಳನ್ನು ತಯಾರಿಸುತ್ತಿದ್ದ ಅಮೆರಿಕದ ಪಿಯರ್‍ಲೆಸ್; ಹೊಲಿಗೆ ಯಂತ್ರಗಳನ್ನು ನಿರ್ಮಿಸುತ್ತಿದ್ದ ಅಮೆರಿಕದ ಹ್ವೈಟ್; ಮರಗೆಲಸಗಳನ್ನು ನಿರ್ವಹಿಸುತ್ತಿದ್ದ ಫ್ರಾನ್ಸಿನ ಪೆನ್‍ಹಾರ್ಡ್ ಮತ್ತು ಲೇಹಾಸಿರಾ ಮುಂತಾದ ಸಂಸ್ಥೆಗಳೆಲ್ಲ ಮೋಟರ್‍ಕಾರುಗಳ ತಯಾರಿಕೆಗೆ ಕೈಹಾಕಿದವು.  ಇಂಗ್ಲೆಂಡಿನ ರೋಲ್ಸ್‍ರಾಯ್ಸ್, ಅಮೆರಿಕದ ಫೋರ್ಡ್ ಕಂಪನಿಗಳು ಮಾತ್ರ ತಂತ್ರವಿದ್ಯಾಪರಿಣತಿ ಮತ್ತು ವ್ಯಾಪಾರ ಕೌಶಲದಿಂದ ಕೂಡಿದ್ದ ಸಂಸ್ಥೆಗಳು ಎಂಬ ಹೆಸರು ಗಳಿಸಿದ್ದವು.

                    ಪ್ರಪಂಚದಲ್ಲಿ ಮೋಟಾರ್ ವಾಹನ ಉತ್ಪಾದನೆ
                              1900	1950	1980	1984
ಅಮೆರಿಕ ಸಂಯುಕ್ತ ಸಂಸ್ಥಾನ	4192	8005859	8010374	109224077
ಆರ್ಜೆಂಟೀನ್	-	-	281793	167223
ಇಂಗ್ಲೆಂಡ್	-	783672	1312914	1133731
ಇಟಲಿ		-	127847	1610297	1601177
ಕೆನಡ		-	387726	1373054	1877966
ಜಪಾನ್		-	31597	11042884	11464920
ಪಶ್ಚಿಮ ಜರ್ಮನಿ	2312	306034	3878553	4045462
ಫ್ರಾನ್ಸ್		-	357552	3378433	3062152
ಬೆಲ್ಜಿಯಮ್	-	248	929005	917409
ಬ್ರಜಿûಲ್		-	-	1165174	864765
ಭಾರತ		-	14688	113907	180919
ಮೆಕ್ಸಿಕೊ		-	        21576	490006	343698
ಯೂಗೋಸ್ಲಾವಿಯ	-	-	283744	272398
ಸ್ಪೇನ್		-	253	1181659	308769
ಸೋವಿಯೆತ್ ಒಕ್ಕೂಟ್ (ಹಿಂದಿನ)	-	362895	2199000	2209400
ಸ್ವೀಡನ್		-	17553	298400	431604

	ವಾಹನಗಳ ತಯಾರಕರು ತಮ್ಮ ಉದ್ಯಮದಲ್ಲಿ ತಂತ್ರವಿದ್ಯೆ ಹಾಗೂ ಲಾಭಗಳಿಸುವ ವಿಧಾನ ಬೆಳೆಸಿಕೊಳ್ಳುವುದರ ಜೊತೆಗೆ ಮತ್ತೇನನ್ನು ಸಾಧಿಸಬೇಕು ಎಂಬುದರ ಬಗ್ಗೆಯೂ ಚಿಂತಿಸಿದರು.  ಪೆಟ್ರೋಲ್ ಎಂಜಿನ್ ರಚಿಸಿದ ಬಳಿಕ ಉಗಿ ಮತ್ತು ವಿದ್ಯುತ್ತು ಬಳಸಿಕೊಂಡು ನಡೆಸುವ ವಾಹನಗಳ ತಯಾರಿಕೆಗಳ ಬಗ್ಗೆ ಸಂಶೋಧನೆ ನಡೆದರೂ ವಿದ್ಯುತ್ಕೋಶಗಳ ಕಾರ್ಯಸಾಥ್ರ್ಯದಿಂದಾಗಿ ಈ ದಿಶೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಲಿಲ್ಲ.

    	ಆಧುನಿಕ ತಾಂತ್ರಿಕ ಕಾರ್ಯವಿಧಾನಗಳ ಬಳಕೆಯಲ್ಲಿ ವಾದ ವಿವಾದಗಳು ತಲೆದೋರಿ ಏಕಸ್ವದ ಬಗೆಗಿನ ವ್ಯಾಜ್ಯಗಳು ಬ್ರಿಟನ್ ಮತ್ತು ಅಮೆರಿಕಗಳಲ್ಲಿ ನ್ಯಾಯಾಲಯಗಳನ್ನು ಹತ್ತಿದುವುದು.  ವ್ಯಾಜ್ಯ ಪರಿಹಾರಕ್ಕಾಗಿ ಅನೇಕ ವಿಚಾರದಲ್ಲಿ ತಯಾರಕರು ಒಪ್ಪಂದಕ್ಕೆ ಬರುವುದು ಅನಿವಾರ್ಯವಾಯಿತು.  ಇದರಿಂದ ಅಧಿಕ ಮೊತ್ತದ ವಾಹನಗಳ ತಯಾರಿಕೆಗೆ ಹಾಗೂ ತಂತ್ರವಿದ್ಯೆಯ ಮುಂಗಡ ಬೆಳವಣಿಗೆಗೆ ಅನುಕೂಲ ಸನ್ನಿವೇಶ ಒದಗಿಬಂತು.  ಉನ್ನತಗುಣಮಟ್ಟದ ಮತ್ತು ವಿನಿಮಯಕ್ಕೆ ಅಳವವಡುವ ಉತ್ಪಾದನೆಯನ್ನು ಬೆಳೆಸುವ ವಿಧಾನಗಳು ಬೆಳೆದವು.

    	1908ರಲ್ಲಿ ಲಂಡನ್ನಿನ ರಾಯಲ್ ಆಟೊ ಮೊಬೈಲ್ ಕ್ಲಬ್‍ನಲ್ಲಿ ಒಂದು ಪ್ರದರ್ಶನ ನಡೆಯಿತು.  ಮೂರು ಕ್ಯಾಡಿಲಾಕ್ ಕಾರುಗಳನ್ನು ಬಿಚ್ಚಿ ಎಲ್ಲವನ್ನೂ ಮತ್ತೆ ಸೇರಿಸಿ 89 ಬಿಡಿಭಾಗಗಳನ್ನು ತೆಗೆದು ಹೊಸಭಾಗಗಳನ್ನು ಅಳವಡಿಸಿ ಕಾರುಗಳನ್ನು ಜೋಡಿಸುವಂಥ ಪ್ರದರ್ಶನ. ಹೀಗೆ ತಯಾರಾದ ಕಾರುಗಳನ್ನು ಯಾವ ತೊಂದರೆಯೂ ಇಲ್ಲದೆ ಸುಮಾರು 750 ಕಿ.ಮೀ. ದೂರ ಓಡಿಸಬಹುದಿತ್ತು.  ಹೆನ್ರಿ ಲೇಲ್ಯಾಂಡ್ ಕ್ಯಾಡಿಲಾಕ್ ಎಂಬವ ಕಾರಿನ ಸಂಸ್ಥಾಪಕನಾಗಿದ್ದ. 

    	ಫೋರ್ಡ್ ತನ್ನ ಮಾಡೆಲ್-ಟಿ ಕಾರಿನಲ್ಲಿ ಅಲ್ಪಸ್ವಲ್ಪ ಬದಲಾವಣೆ ಉಂಟು ಮಾಡಿದಾಗ ಅದರ ಬೆಲೆ ಇಳಿಯಿತು.  1909ರಲ್ಲಿ 1950 ಪೌಂಡುಗಳಷ್ಟು ಬೆಲೆ ಇದ್ದ ಕಾರು 1916ರಲ್ಲಿ 360 ಪೌಂಡುಗಳಷ್ಟು ಇಳಿಯಿತು.  ಆ ವೇಳೆಗೆ ಪ್ರಪಂಚದ ಬೇಡಿಕೆಯ ಅರ್ಧಭಾಗದಷ್ಟು ಮೋಟರ್ ಕಾರುಗಳನ್ನೂ ವಾಹನಗಳನ್ನೂ ಫೋರ್ಡ್ ಕಂಪನಿಯೊಂದೇ ತಯಾರಿಸುತ್ತಿತ್ತು.

    	ಸಿಲಿಂಡರುಗಳ ಸಂಖ್ಯೆಯ ಮೇಲೆ ತೆರಿಗೆ ವಿಧಿಸಿದ್ದರಿಂದ ಸಣ್ಣ ಕಾರುಗಳ ತಯಾರಿಕೆ ಪ್ರಾರಂಭವಾಯಿತು.  ಇದರಿಂದ ಬ್ರಿಟನ್ನಿನ ಕಾರು ಮತ್ತು ವಾಹನಗಳನ್ನು ಹೊರದೇಶದಲ್ಲಿ ಹೆಚ್ಚು ಮಾರಾಟ ಮಾಡುವುದು ಸಾಧ್ಯವಾಗಲಿಲ್ಲ.  ಮಾರಿಸ್ ಮೋಟಾರ್ ಕಂಪನಿಯವರು ಚಲನ ಜೋಡಣೆಯ ಪಂಕ್ತಿಯನ್ನು ರಚಿಸಿ ಅಧಿಕ ಉತ್ಪಾದನೆಮಾಡಲು ಪ್ರಾರಂಭಿಸಿದರು (1934).  ಹಿಲ್‍ಮನ್ ಕಂಪನಿಯವರು ಇದೇ ವಿಧಾನ ಅನುಸರಿಸಿದರು.  ಬೃಹದಾದ್ಯಮ ಸಂಸ್ಥೆಗಳನ್ನು ಪ್ರಾರಂಭಿಸಿ, ಮೋಟರ್ ವಾಹನಗಳ ಬೆಲೆ ಕಡಿಮೆ ಮಾಡಿ ಮಾರಾಟ ಮಾಡುವ ಸಲುವಾಗಿ ಕಾರ್ಖಾನೆಗಳಲ್ಲಿ ಹೆಚ್ಚು ಹೆಚ್ಚು ಹಣ ಹೂಡಲಾಯಿತು.  ಬೃಹದುದ್ಯಮಗಳು ಹುಟ್ಟಿಕೊಂಡುದರ ಸಲುವಾಗಿ ಚಿಕ್ಕ ಕೈಗಾರಿಕಾ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ಒದಗಿತು.

    	ಪ್ರಪಂಚದಲ್ಲೇ ಅತ್ಯಂತ ದೊಡ್ಡದಾಗಿದ್ದ ಜನರಲ್ ಮೋಟರ್ಸ್ ಸಂಸ್ಥೆಯನ್ನು ವಿಲಿಯಮ್ ಡ್ಯೂರೆಂಟ್ ಪ್ರಾರಂಭಿಸಿದ (1908).  ಪ್ಲಿಂಟ್ ಮತ್ತು ಮಿಚಿಗನ್ ಎಂಬವರು ಕಾರುಗಳನ್ನು ತಯಾರಿಸಿದರು.  ಬ್ಯೂಕ್, ಕ್ಯಾಡಿಲಾಕ್, ಓಕ್‍ಲ್ಯಾಂಡ್ ಕಾರುಗಳು ತಯಾರಾದವು.  ಒಂದನೆಯ ಮಹಾಯುದ್ಧದ ಬಳಿಕ ಹಣದ ಮುಗ್ಗಟ್ಟು ತಲೆದೋರಿ ಯಾವ ವಾಹನ ಸಂಸ್ಥೆಯೂ ಬೆಳೆಯಲು ಸಾಧ್ಯವಾಗಲಿಲ್ಲ.  ಫೋರ್ಡ್ ಕಂಪನಿ ಮತ್ತು ಜನರಲ್ ಮೋಟರ್ಸ್ ಮಾತ್ರ ಉಳಿಯಲು ಬಲು ಶ್ರಮಿಸಿದವು.  ಕ್ರೈಸ್ಟ್ಲರ್ ಕಾರ್ಪೊರೇಷನ್ ಪ್ರಾರಂಭವಾಗಿ (1925) ಪ್ಲೈಮತ್ ಕಾರನ್ನು ತಯಾರಿಸಿ ಕಡಿಮೆಬೆಲೆಗೆ ಮಾರುವುದು ಸಾಧ್ಯವಾಯಿತು.  ಮೋಟರ್ ಉದ್ಯಮದಲ್ಲಿ ತಲೆದೋರಿದ ಸ್ಪರ್ಧೆಯ ಸಲುವಾಗಿ ಅನೇಕ ಕಂಪನಿಗಳು ಮುಚ್ಚಿಹೋಗುವ ಪರಿಸ್ಥಿತಿ ಎದುರಾಯಿತು. 1932ರಲ್ಲಿ ಫೋರ್ಡ್ ಕಂಪನಿಯವರು ತಮ್ಮ ಕಾರಿಗೆ ಗಿI ಎಂಜಿನ್ ಅಳವಡಿಸಿ ಕೆಲವೊಂದು ಬದಲಾವಣೆ ಮಾಡಿದರು.  ಈ ಸುಧಾರಣೆ ಅವರಿಗೆ ಅನುಕೂಲವಾಯಿತು.

    	ಯೂರೋಪಿನಲ್ಲಿ ಸಹ 1919-39 ಅವಧಿಯಲ್ಲಿ ಕಡಿಮೆ ಬೆಲೆ-ಅಧಿಕ ಉತ್ಪಾದನೆ ನೀತಿಯನ್ನು ಅನುಸರಿಸಲಾಯಿತು.  ಬ್ರಿಟನ್ನಿನಲ್ಲಿ ವಾಹನ ಕಂಪನಿಗಳು ಹಲವು ಸಾವಿರ ಕಾರುಗಳನ್ನು ತಯಾರಿಸಿದರೂ ಕಂಪನಿಗಳ ಸಂಖ್ಯೆ ಮಾತ್ರ 90 ರಿಂದ 41 ಕ್ಕೆ ಇಳಿಯಿತು.  ಮುಖ್ಯವಾಗಿ ಆಸ್ಟಿನ್, ಮಾರಿಸ್, ಸಿಂಗರ್ ಕಂಪನಿಗಳೇ ಮಾರುಕಟ್ಟೆಯ ಶೇಕಡಾ 75 ಭಾಗವನ್ನು ಆಕ್ರಮಿಸಿದುವು.   ಫ್ರಾನ್ಸಿನಲ್ಲಿ ಪಿಗಾಟ್, ರೆನಾಲ್ಡ, ಸಿಟ್ರಾನ್ ಕಾರುಗಳು ತಯಾರಾದವು (1920).  ಸಿಮ್‍ಸಾ ಎಂಬ ಹೊಸ ಕಂಪನಿಯೊಂದು ತಾನೂ ಕಾರುಗಳ ತಯಾರಿಕೆಯನ್ನು ಆರಂಭಿಸಿತು (1930).  ಜರ್ಮನಿಯ ಮೋಟರ್ ಉದ್ಯಮ ಒಂದನೆಯ ಮಹಾಯುದ್ಧದ ವೇಳೆ ತೊಂದರೆಗೆ ಈಡಾಯಿತು.  1920ರಲ್ಲಿ ಡ್ಯಾಮ್‍ಲರ್, 1926ರಲ್ಲಿ ಬೆನ್ಜ್ ಕಂಪನಿಗಳು ಪ್ರಾರಂಭವಾದುವಾದರೂ ಇವು ಜನರಲ್ ಮೋಟರ್ಸ್ ತನ್ನ ಓಪೆಲ್ ಕಂಪನಿ ಮೂಲಕ ಜರ್ಮನ್ ಮಾರುಕಟ್ಟೆ ಪ್ರವೇಶಿಸಿದ್ದರಿಂದ ಅಷ್ಟಾಗಿ ಬೆಳೆಯಲು ಅವಕಾಶವಾಗಲಿಲ್ಲ.  ಹೆನ್ರಿ ಫೋರ್ಡನ ವಿಧಾನವನ್ನು ಜನ ಮೆಚ್ಚಿದ್ದರಾದರೂ ಜರ್ಮನಿಯ ವಾಹನಪ್ರಪಂಚದಲ್ಲಿ ಅತ ಸ್ಥಾನಗಳಿಸುವುದರಲ್ಲಿ ಯಶಸ್ವಿಯಾಗಲಿಲ್ಲ.  1930ರಲ್ಲಿ ನಾಜಿó ಆಡಳಿತದ ಅಡಿಯಲ್ಲಿ ಫೋಕ್ಸ್‍ವ್ಯಾಗನ್ ಎಂಬ ಹೆಸರಿನಲ್ಲಿ ಅತಿ ಕಡಿಮೆ ಬೆಲೆಯ ಕಾರಿನ ತಯಾರಿಕೆ ಪ್ರಾರಂಭವಾಯಿತು.  (1930).  ಆದರೆ ಯುದ್ಧದ ದೆಸೆಯಿಂದಾಗಿ ಇದು ಹಿಂದೆ ಬಿತ್ತು.  ಇಟಲಿಯಲ್ಲಿ ಕ್ರೀಡೆ ಮತ್ತು ಸ್ಪರ್ಧೆಗಳಿಗಾಗಿಯೇ ಕಾರುಗಳ ಬೆಳೆವಣಿಗೆಯಾದರೂ ಉತ್ಪಾದನಾ ಸಂಸ್ಥೆಗಳು ಮಾತ್ರ ಸಣ್ಣ ಕೈಗಾರಿಕೋದ್ಯಮವಾಗಿಯೇ ಉಳಿಯಬೇಕಾಯಿತು.

    	ಒಂದನೆಯ ಮಹಾಯುದ್ಧದಲ್ಲಿ ಮೋಟರ್ ವಾಹನಗಳು ಮಿಲಿಟರಿ ಸಾಮಾನುಗಳ ಸಾಗಣೆಯೂ ಸೈನಿಕರ ಪ್ರಯಾಣಕ್ಕೂ ಬಲು ಉಪಯುಕ್ತ ಎನಿಸಿದುವು.  ಇದರಿಂದ ಟ್ಯಾಂಕ್ ಮತ್ತು ಕಾರ್ಖಾನೆಗಳು ಸೈನ್ಯಕ್ಕೆ ಅಗತ್ಯವಾದ ಇನ್ನಿತರ ಸಲಕರಣೆಗಳನ್ನು ತಯಾರಿಸುವ ಕಾರ್ಖಾನೆಗಳಿಗೂ  ಪರಿವರ್ತಿತವಾದವು.  ಇದರಿಂದ ಟ್ಯಾಂಕ್ ಮತ್ತು ವಿಮಾನಗಳನ್ನು ತಯಾರಿಸುವುದೂ ಸಾಧ್ಯವಾಯಿತು.  ಈ ಉದ್ಯಮಗಳು ಎರಡನೆಯ ಮಹಾಯುದ್ಧದ ಸಮಯದಲ್ಲಿ ಮಿಲಿಟರಿ ಉಪಕರಣಗಳನ್ನು ತಯಾರಿಸುವ ಛಾಯಾ ಕಾರ್ಖಾನೆಗಳಂತೆ ಇದ್ದುವು.  ಇವುಗಳಲ್ಲಿ ವಿಮಾನ ತಯಾರಿಕೆ ಕೂಡ ನಡೆದಿತ್ತು.  ಇಲ್ಲಿ ವಾಹನ ಕಾರ್ಖಾನೆಗಳ ಆಡಳಿತವರ್ಗ ಮತ್ತು ತಂತ್ರವಿದರ ನೆರವನ್ನು ಪಡೆಯಲಾಯಿತು.

    	ಅಮೆರಿಕದಲ್ಲಿ 1940-45 ಅವಧಿಯಲ್ಲಿ ಸುಮಾರು 2900 ಕೋಟಿ ಡಾಲರ್‍ಗಳಷ್ಟು ಮೌಲ್ಯದ ಮಿಲಿಟರಿ ವಸ್ತುಗಳು ತಯಾರಾದುವು.  ಜೊತೆಗೆ 26 ಲಕ್ಷ ಮಿಲಿಟರಿ ಟ್ರಕ್ಕುಗಳನ್ನೂ 6,60,000 ಜೀಪುಗಳನ್ನೂ ನಿರ್ಮಿಸಲಾಯಿತು.  ವಾಹನ ತಯಾರಿಸುವ ಕಾರ್ಖಾನೆಯನ್ನು ವಿಮಾನ ತಯಾರಿಸುವ ಕಾರ್ಖಾನೆಯಾಗಿ ಪರಿವರ್ತಿಸಿದರೂ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು.  ಬ್ರಿಟನ್ನಿನಲ್ಲಿಯೂ ಮೋಟರ್ ಕಾರ್ಖಾನೆಗಳನ್ನು ಯುದ್ಧಕ್ಕೆ ಅಗತ್ಯವಿದ್ದ ಟ್ಯಾಂಕ್ ಮತ್ತು ವಿಮಾನಗಳನ್ನು ತಯಾರು ಮಾಡುವುದಕ್ಕೆ ಮಾತ್ರವಲ್ಲದೆ ವಿಮಾನಗಳನ್ನು ದುರಸ್ತಿ ಮಾಡಲು ಕೂಡ ಉಪಯೋಗಿಸಿಕೊಳ್ಳಲಾಯಿತು.

    	ಜಪಾನ್ ಕೂಡ ಯುದ್ಧದಿಂದ ಎಚ್ಚೆತ್ತುಕೊಂಡು ವಾಹನ ತಯಾರಿಕೆ ಪ್ರಾರಂಭಿಸಿತು.  ರಷ್ಯದಲ್ಲಿ ಸರ್ಕಾರದ ವತಿಯಿಂದಲೇ ವಾಹನ ತಯಾರಿಸುವ ಮತ್ತು ವಿತರಣೆ ಮಾಡುವ ಕೆಲಸ ನಡೆಯಿತು.  ಎರಡನೆಯ ಮಹಾಯುದ್ಧದ ಅನಂತರ ಅಮೆರಿಕದಲ್ಲಿ ಮಿಲಿಟರಿ ವಾಹನಗಳನ್ನು ತಯಾರಿಸುತ್ತಿದ್ದ ಎಲ್ಲ ಕಾರ್ಖಾನೆಗಳು ಜನರಿಗೆ ಅಗತ್ಯವಾದ ಮೋಟರ್ ವಾಹನಗಳನ್ನು ಸಹ ತಯಾರು ಮಾಡಲಾರಂಭಿಸಿದವು.  ಹೀಗಾಗಿ ಬೇಡಿಕೆಯೂ ಹೆಚ್ಚಾಯಿತು.  ಎರಡನೆಯ ಮಹಾಯುದ್ಧದಲ್ಲಿ ಪೂರ್ಣ ನಿರ್ನಾಮವಾಗಿದ್ದ ಜರ್ಮನಿಯ ವಾಹನ ಕೈಗಾರಿಕೋದ್ಯಮ ಫೋಕ್ಸವ್ಯಾಗನ್ ಕಂಪನಿಯತ್ತ ತನ್ನ ದೃಷ್ಟಿ ಹರಿಸಿತು.  ಹೀಗಾಗಿ ವಾಹನ ತಯಾರಿಕೆಗೆ ಹೆಚ್ಚಿನ ಮಹತ್ತ್ವ ಬಂತು.  ಯುದ್ಧದ ಸಲುವಾಗಿ ಫೋಕ್ಸ್‍ವ್ಯಾಗನ್ ಕಾರ್ಖಾನೆ ಹಾಗೂ ಹೌಸ್‍ಬರ್ಗ್ ನಗರಗಳು ಪೂರ್ಣ ಹಾಳಾಗಿದ್ದುವು.  ಅನಂತರ ಪುನಃ ಕಾರ್ಖಾನೆ ಪ್ರಾರಂಭಗೊಂಡು ಸಣ್ಣ ಕಾರನ್ನು ತಯಾರಿಸಿತು.  ಗಾಳಿಯಿಂದ ತಣ್ಣಗಾಗುವ ಎಂಜಿನನ್ನು ಕಾರಿನ ಹಿಂದೆ ಇಟ್ಟು ಕಾರಿನ ಆಕಾರವನ್ನು ಸಣ್ಣದಾಗಿಯೂ ಸುಂದರವಾಗಿಯೂ ಮಾಡಿದ್ದರಿಂದ ಅಂಥ ಕಾರು ಬಲು ಜನಪ್ರಿಯವಾಯಿತು.  ಪ್ರತಿಯೊಂದು ವರ್ಷವೂ ನಮೂನೆಗಳನ್ನು ಬದಲಾಯಿಸುವ ಪದ್ಧತಿಯನ್ನು ರದ್ದುಮಾಡಿ ಫೋಕ್ಸ್‍ವ್ಯಾಗನ್ ಕಂಪನಿ ಒಂದೇ ನಮೂನೆಯ ಕಾರುಗಳನ್ನು ತಯಾರಿಸುವುದನ್ನು ರೂಢಿಗೆ ತಂದಿತು.  ಕೈಗಾರಿಕೆಗಳನ್ನು ರಾಷ್ಟ್ರೀಕರಣ ಗೊಳಿಸುವುದು ಸರ್ವೆ ಸಾಧಾರಣವಾಗಿದ್ದಂಥ ಆ ಕಾಲದಲ್ಲಿ ಫೋಕ್ಸ್‍ವ್ಯಾಗನ್ ಕಂಪನಿಮಾತ್ರ ಖಾಸಗಿಯವರ ಕೈಯಲ್ಲೇ ಉಳಿಯಿತು.

    	ಫಿಯಟ್ ಎಂಬ ಸಂಸ್ಥೆ (ಫ್ಯಾಬ್ರಿಕ್ ಇಟಲಿಯನಾ ಆಟೊಮೋಬೈಲ್  ಟೋರಿನೋ) ಪ್ರಾರಂಭವಾಯಿತು (1899).  1950 ರ ತನಕ ಇಟಲಿಯಲ್ಲೇ ಉಳಿದಿತ್ತು.  ಆ ವೇಳೆಗೆ ಫ್ರಾನ್ಸಿನಲ್ಲಿ ರೇನಾಲ್ಡ, ಪೇಗೆಂಟ್ ಸೆಟ್ರಾನ್, ಸಿಮ್‍ಕಾ ಕಾರುಗಳ ತಯಾರಿ ನಡೆದಿತ್ತು.  ಸ್ವೀಡನ್ನಿನಲ್ಲಿ ಚಿಕ್ಕ ಕೈಗಾರಿಕೋದ್ಯಮದ ವತಿಯಿಂದ ವಲ್ವೊಸ್ ಮತ್ತು ಸಾಬ್ಸ್ ಕಂಪನಿಗಳು ಪ್ರಪಂಚದ ಮಾರುಕಟ್ಟೆಗೆ ಬಂದವು (1960).

    	ಮೊದಮೊದಲು ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಜಪಾನಿನ ಮೋಟರ್ ಉದ್ಯಮ (1950) ಮೂವತ್ತು ವರ್ಷಗಳ ಅವಧಿಯಲ್ಲಿ ಪ್ರಪಂಚದಲ್ಲಿ ಎರಡನೆಯ ದೊಡ್ಡ ಉದ್ಯಮವಾಗಿ ವರ್ಧಿಸಿತು.  ಮೋಟರ್ ವಾಹನಗಳ ಜೊತೆಗೆ ಡಾಲ್ಟನ್ ಮತ್ತು ಟಯೋಟ ಕಾರುಗಳ ಬಿಡುಗಡೆಯಿಂದಾಗಿ ಜಪಾನಿನ ವಾಹನೋದ್ಯಮ ಪ್ರಪಂಚದ ಎಲ್ಲೆಡೆಯೂ ಸಾಕಷ್ಟು ಖ್ಯಾತಿಗಳಿಸಿತು.  ಎರಡನೆಯ ಮಹಾಯದ್ಧದ ಅನಂತರ ಆ ದೇಶದ ಟ್ರಕ್ಕು ಮತ್ತು ಬಸ್ಸುಗಳಿಗಾಗಿ ಪ್ರಪಂಚದ ವಿವಿಧ ಭಾಗಗಳಿಂದ ಬೇಡಿಕೆ ಬರತೊಡಗಿತು.  ಇತ್ತೀಚಿಗೆ ಜಪಾನಿನಲ್ಲಿ ಗಣಕಗಳ ಸಹಾಯದಿಂದಲೂ ಕಾರಿನ ತಯಾರಿಕೆ ಆಗುತ್ತಿದೆ.  ಮೋಟರ್ ವಾಹನಗಳಿಗೆ ದೂರವಾಣಿ, ಹವಾನಿಯಂತ್ರಣ ಸೌಕರ್ಯಗಳನ್ನು ಅಳವಡಿಸಲಾಗಿದೆ.  ಜಪಾನಿನ ಶೇಕಡಾ 10 ರಷ್ಟು ಜನ ಈ ಉದ್ಯಮದಲ್ಲಿ ತೊಡಗಿದ್ದಾರೆ.  ವಿಜ್ಞಾನ ಮತ್ತು ತಂತ್ರವಿದ್ಯೆಗಳಲ್ಲಿಯ ಪ್ರಗತಿಯಿಂದಾಗಿ ತುಕ್ಕು ನಿರೋಧಕ ಸಾಮಥ್ರ್ಯ ಇರುವ ಉಕ್ಕಿನ ಎಂಜಿನ್ನುಗಳನ್ನು ತಯಾರಿಸಲಾಗಿದೆ.  ಬಣ್ಣ ಬಳಿಯುಲು, ಬೆಸೆತ ಮಾಡಲು, ಬಿಡಿ ಭಾಗಗಳನ್ನು ಜೋಡಿಸಲು ರೋಬಟ್‍ಗಳನ್ನು (ಯಂತ್ರಮಾನವ) ಬಳಸಿ ಕೊಳ್ಳಲಾಗುತ್ತಿದೆ.  ಉಪಕರಣಗಳ ಉತ್ಪಾದನೆ ಸಾಕಷ್ಟು ವೃದ್ಧಿಸಿದೆ.  1985ರಲ್ಲಿ ಪ್ರಪಂಚದಲ್ಲಿ ಒಟ್ಟು ಉತ್ಪಾದನೆ 450 ಲಕ್ಷ ವಾಹನಗಳಾಗಿದ್ದರೆ ಜಪಾನ್ ಒಂದರಲ್ಲೇ 123 ಲಕ್ಷ ವಾಹನಗಳು ತಯಾರಾಗಿದ್ದವು.  ಅಮೆರಿಕದಲ್ಲಿ 127 ಲಕ್ಷ.  ಕೆನಡದಲ್ಲಿ 9 ಲಕ್ಷ, ಯೂರೋಪಿನಲ್ಲಿ ಅಂದರೆ ಜರ್ಮನಿ, ಫ್ರಾನ್ಸ್, ಇಟಲಿ ಮತ್ತು ಸ್ಪೇನ್‍ಗಳಲ್ಲಿ 118 ಲಕ್ಷ ವಾಹನಗಳು ತಯಾರಾಗಿದ್ದುವು.  ಜಪಾನ್ ಸುಮಾರು ಅರ್ಧದಷ್ಟು ಅಂದರೆ 67 ಲಕ್ಷ ವಾಹನಗಳನ್ನು ರಫ್ತು ಮಾಡಿತ್ತು.  ಸುಮಾರು 50 ಸಾವಿರ ವಾಹನಗಳನ್ನು ಆಮದು ಮಾಡಿಕೊಂಡಿತ್ತು.

    	ಮೋಟಾರ್ ವಾಹನ ಉದ್ಯಮ ಬೃಹತ್ ಕೈಗಾರಿಕೆಯಾಗಿ ಬೆಳೆಯುತ್ತ ಬಂದಿದೆ.  ಅಮೆರಿಕದಲ್ಲಿ ಈ ಉದ್ಯಮ ಏಕೈಕ ದೊಡ್ಡ ಪ್ರಮಾಣದ ತಯಾರಿಕಾ ಸಂಸ್ಥೆಯಾಗಿ ಪರಿಣಮಿಸಿದೆ.  ಹೆಚ್ಚು ಹೆಚ್ಚು ಕೆಲಸ ಮಾಡುವುದರ ಜೊತೆಗೆ ಹೆಚ್ಚು ಹೆಚ್ಚು ಹಣ ಗಳಿಸುವಂಥ ಕೈಗಾರಿಕೆಯೂ ಆಗಿದೆ.  ಅಲ್ಲಿ 41% ಭಾಗ ಜನ ಇದೊಂದೇ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.  ಬೃಹತ್ ಕೈಗಾರಿಕೋದ್ಯಮಿಗಳು ಮಾತ್ರ ಈ ಉದ್ಯಮದಲ್ಲಿ ಉಳಿಯುವಂತಾಗಿ ಸಣ್ಣ ಕೈಗಾರಿಕೆಗಳು ಕಣ್ಮರೆಯಾಗುತ್ತಿವೆ.  ವಾಹನಗಳ ಜೋಡಣೆಯನ್ನು ವಿಕೇಂದ್ರಿಕರಿಸಿ ಬೇರೆ ಬೇರೆ ಪ್ರದೇಶಗಳಲ್ಲದೆ ಬೇರೆ ದೇಶಗಳಲ್ಲೂ ಬಿಡಿ ಭಾಗಗಳನ್ನು ಕಳುಹಿಸಿ ಅಲ್ಲೇ ಜೋಡಿಸುವ ಕಾರ್ಖಾನೆಗಳು ಪ್ರಾರಂಭವಾಗಿವೆ.  ಇದರಿಂದ ಕಾರನ್ನು ಕಡಿಮೆ ಬೆಲೆಗೆ ಮಾರುವುದೂ ಕೊಳ್ಳುವುದೂ ಸಾಧ್ಯವಾಗಿದೆ.

    	ಮೋಟರ್ ಉದ್ಯಮದ ಕಾರ್ಖಾನೆಗಳು ಕಾರುಗಳನ್ನು ಮಾತ್ರವಲ್ಲದೆ ಬೇರೆ ವಸ್ತುಗಳನ್ನು ಕೂಡ ಉತ್ಪಾದಿಸುವುದು ಸಾಧ್ಯವಾಗಿದೆ.  ಫೋರ್ಡ್ ಮತ್ತು ಜನರಲ್ ಮೋಟರ್ಸ್ ಸಂಸ್ಥೆ ವಿಮಾನದ ಎಂಜಿನ್, ರೆಫ್ರಿಜಿರೇಟರ್, ಡೀಸಲ್ ಎಂಜಿನ್ ಮತ್ತು ಡೀಸಲ್ ರೈಲು ಎಂಜಿನ್, ಎತ್ತುಗೆ ಯಂತ್ರಗಳು ಮೊದಲಾದವನ್ನು ತಯಾರುಮಾಡುತ್ತಿದೆ.  ರೇಡಿಯೋ, ದೂರದರ್ಶನ ವಿದ್ಯುದುಪಕರಣಗಳು ಇವೇ ಮುಂತಾದವನ್ನು ಕೂಡ ತಯಾರಿಸಲಾಗಿತ್ತಿದೆ.  ಫಿಯಟ್ ಕಂಪನಿ ಇಟಲಿಯ ಶೇಕಡಾ 90 ಭಾಗ ವಾಹನಗಳನ್ನು ಮಾಡುವ ಬೃಹತ್ ಕೈಗಾರಿಕೆಯಾದರೂ ವಿಮಾನ, ರೈಲು ಎಂಜಿನ್ನುಗಳ, ಮೆರೀನ್ ಎಂಜಿನ್, ರೆಫ್ರಿಜಿರೇಟರುಗಳನ್ನು ಕೂಡ ತಯಾರಿಸಲು ಪ್ರಾರಂಭಿಸಿದೆ.  ಜಪಾನಿನ ಟಯೋಟ ಮತ್ತು ನಿಸಾನ್ ಸಂಸ್ಥೆಗಳು ರೈಲುಗಾಡಿ ಮತ್ತು ವಿಮಾನಗಳನ್ನು ತಯಾರಿಸುತ್ತಿವೆ.

   	ಬಹುಸಂಖ್ಯಾತರ ಬೇಡಿಕೆಯಾಗಿರುವ ಕಡಿಮೆ ಬೆಲೆಯ ಹಾಗೂ ಚಿಕ್ಕ ಆಕಾರದ ಕಾರುಗಳನ್ನು ತಯಾರಿಸುವಲ್ಲಿ ಎಂಜಿನಿಯರ್, ತಂತ್ರವಿದ, ವಿನ್ಯಾಸಕ, ಉದ್ಯಮಪತಿ ಮೊದಲಾದವರೆಲ್ಲ ಕೂಡಿ ಸಮ್ಮೇಳನ ನಡೆಸಿ ವಾಹನದ ರೂಪರೇಷೆಗಳನ್ನೂ ಬೆಲೆ ವಿಚಾರವನ್ನೂ ನಿರ್ಣಯಿಸುವ ಸಲುವಾಗಿ ಯುಕ್ತ ಏರ್ಪಾಡುಗಳ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದಾರೆ.  ಸ್ವತಶ್ಚಲಿ ಯಂತ್ರಗಳನ್ನು ಬಳಸಿ, ಗಣಕಯಂತ್ರ ಹಾಗೂ ರೋಬಟ್‍ಗಳ ಉಪಯೋಗ ಪಡೆದು ವಿವಿಧ ಭಾಗಗಳನ್ನು ಜೋಡಿಸುವ ಕ್ರಮವೂ ಉಂಟು.

    	ಅಮೆರಿಕದ ಜನರಲ್ ಮೋಟರ್ಸ್ ಮತ್ತು ಬ್ರಿಟನ್ನಿನ ವಾಕ್ಸಲ್, ಜರ್ಮನಿಯ ಓಪೆಲ್ ಮತ್ತು ಆಸ್ಟ್ರೇಲಿಯದ ಹೋಲ್ಡಾನ್, ಫೋರ್ಡ ಸಂಸ್ಥೆಗಳು ಬಹಳಷ್ಟು ವರ್ಷಗಳ ಕಾಲ ಬ್ರಿಟನ್ ಜರ್ಮನಿ, ಫ್ರಾನ್ಸ್, ಸ್ಪೇನ್, ಡೆನ್‍ಮಾರ್ಕ್ ಮತ್ತು ಹಾಲೆಂಡ್‍ಗಳಲ್ಲಿ ವ್ಯಾಪಾರ ನಡೆಸಿದುವು.  ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಾಹನಗಳ ಬೇಡಿಕೆ ಬಂದದ್ದರಿಂದ ಮತ್ತು ಕೊಂಡುಕೊಳ್ಳಲು ಹಣವೂ ಇದ್ದದ್ದರಿಂದ ರಫ್ತಿಗೆ ಹೆಚ್ಚಿನ ಅವಕಾಶ ಒದಗಿಬಂತು.  ಪ್ರಪಂಚದ ಒಟ್ಟು ಸುಮಾರು 2.5 ಕೋಟಿ ವಾಹನಗಳಲ್ಲಿ ಸುಮಾರು ಒಂದು ಕೋಟಿಯಷ್ಟು ವಾಹನಗಳು ಬೇರೆ ಬೇರೆ ದೇಶಗಳಲ್ಲಿ ಜೋಡಣೆಗೊಂಡಿವೆ.  ಅಮೆರಿಕ, ಯುರೋಪ್ ಮತ್ತು ಜಪಾನ್ ದೇಶಗಳ ಸಂಸ್ಥೆಗಳು ಈ ವ್ಯಾಪಾರದಲ್ಲಿ ಹೆಚ್ಚು ಪ್ರಾಧಾನ್ಯ ಪಡೆದಿವೆ.  ಆಮದು ಮಾಡಿಕೊಂಡ ವಾಹನಗಳಿಗೆ ಹೆಚ್ಚು ತೆರಿಗೆ ವಿಧಿಸಿದ್ದರಿಂದ ಅನೇಕ ದೇಶಗಳಲ್ಲಿ ಬಿಡಿಭಾಗಗಳನ್ನು ರಫ್ತುಮಾಡಿ ಜೋಡಿಸಲು ಉತ್ತೇಜನ ದೊರೆಯಿತು.  ಬೆಲೆ ಸಹ ಕಡಿಮೆಯಾಯಿತು.  ಜೋಡಣೆ ಕೆಲಸ ನಿರ್ವಹಿಸುವ ಸಂಸ್ಥೆಗಳಲ್ಲಿ ವಾಹನ ತಯಾರುಮಾಡುವ ಮೂಲಸಂಸ್ಥೆಯ ಅರ್ಧದಷ್ಟು ಬಂಡವಾಳ ಹೂಡಿಕೆ ಆಗಿದೆ.  ತಂತ್ರವಿದ್ಯೆ ಮತ್ತು ಆಡಳಿತ ವಿಚಾರದಲ್ಲಿ ಮೂಲಸಂಸ್ಥೆಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ.  ಭಾರತ ಮತ್ತು ಮೆಕ್ಸಿಕೋಗಳಲ್ಲಿ ಶೇಕಡಾ 60 ರಿಂದ 80 ಭಾಗ ದೇಶೀಯ ಭಾಗಗಳನ್ನೇ ಜೋಡಿಸಲಾಗುತ್ತಿದೆ.

    	ಮೋಟರ್ ವಾಹನಗಳನ್ನು ತಯಾರಿಸುವಲ್ಲಿ ವಿಜ್ಞಾನ ಮತ್ತು ತಂತ್ರವಿದ್ಯೆಯ ನೆರವನ್ನು ಬಹುವಾಗಿ ಪಡೆಯಲಾಗಿದೆ.  ಸುರಕ್ಷತಾ ಹಾಗೂ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ವಾಹನಗಳಲ್ಲಿ ಅಳವಡಿಸಲಾಗುವುದಿದೆ.  ಅಂತರ್ದಹನ ಎಂಜಿನ್ನುಗಳ ಬದಲಿಗೆ ವಿದ್ಯುತ್ತನ್ನು ಬಳಸಿಕೊಂಡೂ ವಾಹನಗಳನ್ನು ಚಲಿಸುವುದುಂಟು.  ಸೌರಶಕ್ತಿಯನ್ನು ಬಳಸಿಕೊಳ್ಳುವುದರ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ.

    	ಭಾರತದಲ್ಲಿ ಮೋಟರ್ ಉದ್ಯಮ :  ಭಾರತದಲ್ಲಿ ಮೊದಲು ಮೋಟರ್ ವಾಹನವನ್ನು ಆಮದು ಮಾಡಿಕೊಂಡದ್ದು 1898ರಲ್ಲಿ.  1921ರ ವೇಳೆಗೆ ವಾಹನಗಳ ಸಂಖ್ಯೆ 4000 ಆಗಿತ್ತು.  ಕಚ್ಚಾ ರಸ್ತೆಗಳ ಮೇಲೆ ವಾಹನ ಹೊಂದಿಕೊಳ್ಳದೆ ತೊಂದರೆಗೀಡಾದುವು.  ರಕ್ಷಣೆ ಮತ್ತು ಮಿಲಿಟರಿಯವರ ಅಗತ್ಯಕ್ಕಾಗಿಯೂ ವಾಹನಗಳನ್ನು ಆಮದುಮಾಡಿಕೊಳ್ಳಲಾಯಿತು.  ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಯ ಅನ್ವಯ ಮೋಟರ್ ವಾಹನಗಳನ್ನು ಆಮದು ಮಾಡಿಕೊಳ್ಳುವ ಹಾಗೂ ಅವನ್ನು ದೇಶದಲ್ಲೇ ತಯಾರುಮಾಡುವ ಕಾರ್ಯಕ್ರಮವನ್ನೂ ಹಾಕಿಕೊಳ್ಳಲಾಯಿತು.
ಬೊಂಬಾಯಿ ಸೈಕಲ್ ಮತ್ತು ಮೋಟರ್ ಕಂಪನಿಯವರು ಮೊದಲ ಬಾರಿಗೆ (1898) 4 ಕಾರುಗಳನ್ನು ವಿದೇಶದಿಂದ ಆಮದುಮಾಡಿಕೊಂಡರು.  ಹಿಂದೂಸ್ಥಾನ್ ಮೋಟಾರು ಲಿಮಿಟೆಡ್ ಕಂಪನಿ ಪ್ರಥಮವಾಗಿ (1949) ಭಾರತದಲ್ಲಿ ಕಾರು ತಯಾರಿಕೆಯನ್ನು ಪ್ರಾರಂಭಿಸಿತು.  ಪೆಟ್ರೋಲಿನಿಂದ ಕೆಲಸಮಾಡುವಂಥ ಎಂಜಿನ್ನುಗಳು ಮಾತ್ರವಲ್ಲದೆ ಡೀಸಲ್ ಎಣ್ಣೆಯಿಂದ ಕೆಲಸಮಾಡುವ ಎಂಜಿನ್ನುಗಳೂ ಬಳಕೆಗೆ ಬಂದವು.
1953-54 ಆಮದು ನೀತಿಯಿಂದ ಸ್ವದೇಶೀ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿ ಅವನ್ನು ತಯಾರಿಸುವ ಸಂಸ್ಥೆಗಳು ನಷ್ಟಕ್ಕೆ ಒಳಗಾದುವು.  ರಕ್ಷಣೆ ನೀಡಲು ಮುಂದೆ ಬಂದ ಸರ್ಕಾರ ಸ್ವದೇಶೀ ವಾಹನಗಳಿಗಾಗಿ ಉತ್ತೇಜನ ನೀಡಬೇಕಾಯಿತು.  ಹೀಗಾಗಿ 1954ರಲ್ಲಿ 2.94 ಲಕ್ಷ ವಾಹನಗಳು ತಯಾರಾದುವು.  ತೆರಿಗೆಯ ಒತ್ತಡ ಮತ್ತು ರಾಷ್ಟ್ರೀಕರಣದಿಂದ ಮುಂದೆ ಹೆಚ್ಚಾಗಿ ಮೋಟರ್ ವಾಹನಗಳು ಉತ್ಪಾದನೆಯಾಗಲಿಲ್ಲ.  ಎರಡನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ವಿದೇಶೀವಿನಿಮಯದ ಮುಗ್ಗಟ್ಟಿನಿಂದಾಗಿ ಕೇವಲ 50 ಸಾವಿರ ವಾಹನಗಳನ್ನು ತಯಾರಿಸಿದರೆ 1977ರಲ್ಲಿ 29.37 ಲಕ್ಷ ವಾಹನಗಳನ್ನು ತಯಾರಿಸಲಾಯಿತು.

	ಮೋಟರ್ ವಾಹನಗಳನ್ನು ಮೊದಲಿಗೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಭಾರತ 1975-76ರ ಅವಧಿಯಲ್ಲಿ ರಫ್ತುಮಾಡುವ ಸಾಮಥ್ರ್ಯ ಪಡೆಯಿತು.  ವಿಶೇಷ ಗುಣಮಟ್ಟದ ಉಕ್ಕು ತಯಾರಿಕೆ, ಕೊಳ್ಳುವ ಅಸಾಮಥ್ರ್ಯ ಹಾಗೂ ವಿದೇಶೀ ವಿನಿಮಯದ ಅಲಭ್ಯತೆ, ನೂತನ ತಾಂತ್ರಿಕಜ್ಞಾನದಲ್ಲಿ ಹೆಚ್ಚಳ ಇಲ್ಲದಿದ್ದುದು ಮುಂತಾದವೆಲ್ಲ ಭಾರತದಲ್ಲಿ ಮೋಟರ್ ವಾಹನ ತಯಾರಿಕೆಗೆ ಪ್ರತಿಕೂಲ ಸನ್ನಿವೇಶವನ್ನು ಒದಗಿಸಿದ್ದುವು.  ಆದರೆ 1965ರಲ್ಲಿ ಭಾರತ ಸರ್ಕಾರದ ಕಾರ್ ಆಮದು ನಿಷಿದ್ಧದ ಬಗೆಗಿನ ಧೋರಣೆಯಿಂದ ದೇಶೀಯ ಮೋಟರ್ ಉದ್ಯಮಕ್ಕೆ ಕೊಂಚಮಟ್ಟಿನ ಬಲ ದೊರೆತಂತಾಯಿತು. ಸಣ್ಣ ಮೋಟರ್ ವಾಹನಕ್ಕೆ ಇದ್ದ ಬೇಡಿಕೆ ಕೂಡ ಹೆಚ್ಚಾಯಿತು. ವಾಹನ ಉತ್ಪಾದನೆಯಲ್ಲಿ ಇಳಿತ ಕಂಡುಬಂತು.

	ಭಾರತದಲ್ಲಿ 1953ನೆಯ ಇಸವಿಯನ್ನು ವಾಹನ ಉತ್ಪಾದನಾ ವರ್ಷ ಎಂದು ಪರಿಗಣಿಸಲಾಯಿತು.  1974ರಲ್ಲಿ ಪೆಟ್ರೋಲ್ ಅಭಾವ ಕಂಡು ಬಂದಾಗ ಡೀಸಲ್ ಎಣ್ಣೆಯಿಂದ ನಡೆಯುವ ಎಂಜಿನ್ನಿನ ಉಪಯೋಗ ಹೆಚ್ಚಾಯಿತು.

	ಭಾರತದಲ್ಲಿ ರಸ್ತೆಗಳು ಚೆನ್ನಾಗಿರಲಿಲ್ಲವಾದರೂ ಮೊದಲಿಗೆ 20 ಸಾವಿರ ವಾಹನಗಳು ಆಮದಾಗುತ್ತಿದ್ದವು.  1930ರಲ್ಲಿ ಜನರಲ್ ಮೋಟರ್ಸ್ ಮತ್ತು ಫೋರ್ಡ್ ಸಂಸ್ಥೆಗಳಿಂದ ವಾಹನಗಳ ಬಿಡಿಭಾಗಗಳನ್ನು ತರಿಸಿಕೊಂಡು ಮುಂಬಯಿಯಲ್ಲಿ ಜೋಡಣೆಕಾರ್ಯ ಪ್ರಾರಂಭಿಸಲಾಯಿತು.  ಕರ್ನಾಟಕದಲ್ಲಿ 1935ರಲ್ಲಿ ಎಮ್. ವಿಶ್ವೇಶ್ವರಯ್ಯನವರು ಸ್ವದೇಶದಲ್ಲೇ ಕಾರು ತಯಾರಿಸುವ ಕಾರ್ಖಾನೆ ಸ್ಥಾಪಿಸಲು ಪ್ರಯತ್ನಿಸಿದರು.  ಸರ್ಕಾರದ ಉತ್ತೇಜನ ದೊರಕಲಿಲ್ಲವಾದ್ದರಿಂದ ಆ ಪ್ರಯತ್ನ  ಸಫಲವಾಗಲಿಲ್ಲ. 1942ರಲ್ಲಿ ಹಿಂದೂಸ್ಥಾನ್ ಮೋಟರ್ ಕಂಪನಿಯೂ 1944ರಲ್ಲಿ ಪ್ರೀಮಿಯರ್ ಆಟೋಮೊಬೈಲ್ ಕಂಪನಿಯೂ ಕಾರ್ಖಾನೆಗಳನ್ನು ಸ್ಥಾಪಿಸಿ ಮೋಟರ್ ವಾಹನಗಳ ತಯಾರಿಕೆ ಪ್ರಾರಂಭಿಸಿದವು. ಆಮದು ಮಾಡಿಕೊಂಡ ಭಾಗಗಳನ್ನು ಜೋಡಿಸಿ ಕಾರುಗಳನ್ನು ತಯಾರುಮಾಡುವುದರಿಂದ ಪ್ರಾರಂಭಿಸಿ ಕ್ರಮೇಣ ಸ್ವದೇಶೀ ಭಾಗಗಳನ್ನು ತಯಾರಿಸಲು ಪ್ರಾರಂಭಿಸಲಾಯಿತು.  ಅನಂತರ ಕಾರು ಕಾರ್ಖಾನೆ, ಜೀಪ್ ಕಾರ್ಖಾನೆ, ವಾಣಿಜ್ಯ ವಾಹನ ಮತ್ತು ದ್ವಿಚಕ್ರವಾಹನ ಕಾರ್ಖಾನೆಗಳು ಪ್ರಾರಂಭವಾದವು. ಹಸುರು ಕ್ರಾಂತಿಯಿಂದ ಟ್ರ್ಯಾಕ್ಟರುಗಳೂ ಪೆಟ್ರೋಲ್ ಅಭಾವದಿಂದಾಗಿ ಎರಡು ಚಕ್ರದ ಮೋಪೆಡ್‍ಗಳೂ ತಯಾರಾಗ ತೊಡಗಿದವು.  1984ರಲ್ಲಿ ಭಾರತದಲ್ಲಿ ಮೋಟರ್‍ವಾಹನಗಳನ್ನು ತಯಾರುಮಾಡುವ 47 ಕಾರ್ಖಾನೆಗಳಿದ್ದುವು.

	ಉತ್ಪಾದನೆ ಮತ್ತು ರಫ್ತು : ಅಶೋಕ್ ಲೇಲ್ಯಾಂಡ್ ಕಂಪನಿ ರೂ 24.220 ಲಕ್ಷ ಮೌಲ್ಯದ ವಾಣಿಜ್ಯವಾಹನಗಳನ್ನು ಉತ್ಪಾದಿಸಿ ರೂ 1030 ಲಕ್ಷ ಮೌಲ್ಯದ ವಾಹನಗಳನ್ನು ರಫ್ತುಮಾಡಿದೆ.  ಹಿಂದೂಸ್ಥಾನ್ ಮೋಟರ್ ಲಿಮಿಟೆಡ್ ಸಂಸ್ಥೆಯನ್ನು 1946ರಲ್ಲಿ ಪ್ರವರ್ತಿಸಲಾಯಿತು.  ಇದು ಕಾರು, ಬಸ್ಸು, ಛಾಸಿ,  ಟ್ರಕ್ಕುಗಳನ್ನು ತಯಾರುಮಾಡುತ್ತಿವೆ.  ಇದು 1983ರಲ್ಲಿ ರೂ 17,690 ಲಕ್ಷ ಮೌಲ್ಯದ ಕಾರುಗಳನ್ನು ಉತ್ಪಾದಿಸಿ ಸುಮಾರು ರೂ 335.7 ಲಕ್ಷ ಮೌಲ್ಯದ ವಾಹನಗಳನ್ನು ರಫ್ತು ಮಾಡಿದೆ.  ಇದರಲ್ಲಿ 3000 ವಾಣಿಜ್ಯವಾಹನಗಳ ಉತ್ಪಾದನೆಗೆ ಅವಕಾಶ ಉಂಟು.

	ಮಹೀಂದ್ರ ಮತ್ತು ಮಹೀಂದ್ರ ಲಿಮಿಟೆಡ್ ಸಂಸ್ಥೆಯನ್ನು 1949ರಲ್ಲಿ ಸ್ಥಾಪಿಸಲಾಯಿತು.  ಇದು 1982ರಲ್ಲಿ ರೂ 12.700 ಲಕ್ಷ ಮೌಲ್ಯದ ಜೀಪ್, ರೂ 6290 ಲಕ್ಷ ಮೌಲ್ಯದ ಟ್ರಕ್, ರೂ 6970 ಲಕ್ಷಮೌಲ್ಯದ ಟ್ರ್ಯಾಕ್ಟರ್ ಉತ್ಪಾದಿಸಿ ಸುಮಾರು ರೂ 2910 ಮೌಲ್ಯದ ವಾಹನಗಳನ್ನು ರಫ್ತು ಮಾಡಿದೆ. 

	ಮಾರುತಿ ಉದ್ಯೋಗ್ ಲಿಮಿಟೆಡ್ ಸಂಸ್ಥೆಯನ್ನು 1983ರಲ್ಲಿ ಪ್ರಾರಂಭಿಸಲಾಯಿತು.  ಇದು ಕಾರು ಮತ್ತು ಹಗುರ ವಾಹನಗಳನ್ನು ತಯಾರಿಸುತ್ತಿದೆ.

	ಪ್ರೀಮಿಯರ್ ಆಟೋಮೋಬೈಲ್ ಲಿಮಿಟೆಡ್ ಸಂಸ್ಥೆಯನ್ನು 1947ರಲ್ಲಿ ಸ್ಥಾಪಿಸಲಾಯಿತು.  ಇದು ಸುಮಾರು ರೂ. 11.440 ಲಕ್ಷ ಮೌಲ್ಯದ ಕಾರುಗಳನ್ನು ತಯಾರಿಸಿದರೂ 55 ಲಕ್ಷ ಮೌಲ್ಯದ ವಾಹನಗಳನ್ನು ರಫ್ತು ಮಾಡಿದೆ.

	ಸ್ಟಾಂಡರ್ಡ್ ಮೋಟರ್ ಪ್ರಾಡಕ್ಟ್ ಆಫ್ ಇಂಡಿಯ ಕಂಪನಿಯನ್ನು 1959ರಲ್ಲಿ ಸ್ಥಾಪಿಸಲಾಯಿತು.  ಇದು ರೂ. 367 ಲಕ್ಷ ಮೌಲ್ಯದ ವಾಣಿಜ್ಯ ವಾಹನ ಮತ್ತು ಕಾರುಗಳನ್ನು ಉತ್ಪಾದಿಸಿ ಸುಮಾರು ರೂ. 30 ಲಕ್ಷಮೌಲ್ಯದ ವಾಹನಗಳನ್ನು ರಫ್ತು ಮಾಡಿದೆ.

	ತಾತಾ ಎಂಜಿನಿಯರಿಂಗ್ ಲೋಕೊಮೋಟಿವ್ ಕಂಪನಿ ಲಿಮಿಟೆಡ್ ಸಂಸ್ಥೆಯನ್ನು 1954ರಲ್ಲಿ ಪ್ರಾರಂಭಿಸಲಾಯಿತು.  ಇದರಲ್ಲಿ ಟ್ರಕ್ ಮತ್ತು ಛಾಸಿಗಳ ತಯಾರಿಕೆ  ನಡೆದಿದೆ.  ಸುಮಾರು ರೂ. 79.980 ಲಕ್ಷ ಮೌಲ್ಯದ ಟ್ರಕ್ ಮತ್ತು ಛಾಸಿಗಳ ಉತ್ಪಾದನೆ ಇಲ್ಲಿ ಆಗಿದ್ದು ರೂ. 5.480 ಲಕ್ಷಮೌಲ್ಯದ ರಫ್ತನ್ನು ಮಾಡಿದೆ.
(ಎಚ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ